Skip to main content

ಹಾಸ್ಟೆಲ್ ಹುಡುಗರು ಇಳಿಯದ ಹ್ಯಾಂಗೋವರು!

 

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನೆಮಾ ಮುಗಿದಮೇಲೆ ನೀವು ಅದರಿಂದ ಹೊರಗೆ ಬರಬಹುದು.ಆದರೆ ಹಾಸ್ಟೆಲ್ ನಿಮ್ಮಿಂದ ಬೇಗ ಹೊರಗೆ ಬರೋಲ್ಲ. ಮೆಲುಕು ಹಾಕಿದಷ್ಟೂ, ನಿಮ್ಮ ಬಳಗದಲ್ಲಿ ಹಂಚಿಕೊಂಡಷ್ಟು ಆಳ ಹೆಚ್ಚು.

ಹೇಳಲೇಬೇಕು ಅಂತ ನೆನಪಿಟ್ಟುಕೊಂಡು ಬಂದ ವಿಷಯಗಳ ಜೊತೆ ಸುಪ್ತ ಮನಸ್ಸಿಗೆ ತಾಗಿದ ಹಲವು ಕ್ಷಣಗಳು ಸಿನೆಮಾ ನೋಡಿ ಬಂದಾಗಿನಿಂದ ಅನುಭವಕ್ಕೆ ಬಂದಂತೆ... ಒಲಿದಂತೆ..

ಹೀಗೊಂದು ಇತ್ತಲ್ಲ ಡೈಲಾಗ್. ಅಲ್ಲೊಂದು ಟಾಂಗ್, ಇನ್ನೊಬ್ಬನ expression, ಮೂಲೆಯಿಂದ ತೂರಿ ಬರೋ ಪಟಾಕಿ, ಲೇಟ್ ಆಗಿ ಹೊಳೆಯೋ ಅರ್ಥಗಳು ಇತ್ಯಾದಿ.

ಉಲ್ಟಾ T shirt ಎಕೋ, ಇವನ character ಥರಾನೇ ಇವ್ನು ನೆನಪೂ.. ಏನ್ ಹೇಳಿ ಅಂತ Late ಅಗಿ ತಿರುಗಿದ್ದು. Genie ಕಿವಿಯಲ್ಲಿ ಮಾತಾಡುವಾಗ ಕಚಗುಳಿ ನಗು, mobile ಗಳನ್ನ ಇಟ್ಟಿದ್ದ ಬ್ಯಾಗ್ ಕಳ್ಕೊಂಡಿದ್ದು. ಹಾಸ್ಟೆಲ್ ಮೆಲುಕಿನಲ್ಲಿ ಸಿಗೋ ಸಾವಿರ ಹೈಲೈಟ್ ಗಳಲ್ಲಿ ಒಂದು.

ಪ್ರೊಟೆಸ್ಟ್ ಸ್ಯಾಂಗ್ ಮತ್ತೆ ಟ್ರೈಲರ್ ನಲ್ಲಿ ಹಲವರು ಪರಿಚಯ ಆಗಿದ್ರು, ಆ ಎಲ್ಲ ವಾಮನರು ಮಹಾಬಲಿಗಳಾಗಿ ನಮ್ಮ ತಲೆಮೇಲೆ ಕಾಲಿಡುವುದು ಸಿನಿಮಾದ ಕ್ರಿಯೇಟಿವ್ ತಿರುವುಗಳಲ್ಲಿ. ಕಥೆ ಬರೆದವರು ಇಲ್ಲಿರೋ ಎಲ್ಲ ಪಾತ್ರಗಳ ಜೊತೆ ಬದುಕಿದ್ದಕ್ಕೆ ಹೀಗೊಂದು ಪ್ರಪಂಚ ಸೃಷ್ಟಿಯಾಗಿದೆ ಅನಿಸುತ್ತೆ. ಪಾತ್ರ ಬರೆದರೆ, ತೆರೆಯ ಮೇಲೆ ಕಟ್ಟಿಕೊಟ್ಟರೆ ಮುಗಿಯಲ್ಲ ಕಟೌಟ್ ಆಗಬೇಕು ಅಂದ್ರೆ ಸುಮ್ನೇನಾ? ಚಿತ್ರತಂಡ ಥೀಯೇಟರ್ ಹೊರಗೆ ವಾರ್ಡನ್ ಅವರ ಕಟೌಟ್ ನಿಲ್ಲಿಸಿತ್ತು. ಅದು ಪ್ರೇಕ್ಷಕರ ಮನಸಲ್ಲಿ ಪಾತ್ರ ಎದ್ದು ನಿಂತ ಎತ್ತರದ ಪ್ರತಿರೂಪ. ಇಲ್ಲಿ ಎಲ್ಲರೂ ಕಟೌಟ್ ಆಗಲು ಅರ್ಹರು.

ಮೆಚ್ಚಿದ ಸಿನಿಮಾಗಳಲ್ಲಿನ ಅಚ್ಚು ಒತ್ತಿದ ಪಾತ್ರಗಳಂತೆ, ಹಾಸ್ಟೆಲ್ ನ ಹುಡುಗರಲ್ಲಿ ಬಹುತೇಕರು ತಮ್ಮ ತೆರೆ ಮೇಲಿನ ಸಮಯಾವಕಾಶದಲ್ಲಿ ತಮ್ಮ ಇರುವಿಕೆ ನಿರೂಪಿಸಿದ್ದಾರೆ. ಮೊದಲ ಪರಿಚಯ ಮಂಜನಿಂದ.. ಕೊನೆಯಲ್ಲಿ ಬರುವ water tanker ನವನು ನೆನಪಿಗಿಳಿಯುವುದು ಸಂದರ್ಭ ಸಮೇತ.ಯಾವುದು ಕೃತಕವಲ್ಲ. ಫ್ರೇಮ್ ತುಂಬಾ ಹುಡುಗರು.. ಎಲ್ಲರೂ ಮಾತಾಡ್ತಾರೆ.. ಎಲ್ಲರೂ ನಿಮ್ಮನ್ನ ತಲುಪುತ್ತಾರೆ. ನೆನಪಲ್ಲಿ ಉಳಿತಾರೆ. ಅಜಿತ, ನಿಕ್ಕಿ, ಅಭಿ, ರಾಣಾ, ಗೋತ, ದಿ ಗ್ರೇಟ್ ಜೀನಿ, ಎಕೋ, ಅವ್ನ್ ಹೆಸರೇನು ಅವ್ನ್ ಹೆಸರೇನು ಅಂತ ಎಲ್ಲರು ಮರೆತಿರೋ ಹೆಸರಿನವ.. ಪ್ರಾರ್ಥಿಸಿ ಚಮತ್ಕಾರ ಮಾಡುವ Xavier, ಸ್ಮಿತಾ ಮತ್ತವಳ  ಮೂರು ಚುಕ್ಕಿ ಲೋಕ..

 Theatre ನಿಂದ ಹೊರಗೆ ಬಂದು ನಮ್ಮ ಸುತ್ತ ನಡೆಯೋ ಘಟನೆಗಳಿಗೆ ಹಾಸ್ಟೆಲ್ ಹುಡುಗರ ನೋಡಿದ್ದರ ಪರಿಣಾಮ ಒಳಗಿನ ದನಿಯಾಗಿ ಅವರು ಮಾತಾಡ್ತಾ ಇರ್ತಾರೆ.

ಸಿನೆಮಾ ಹೋಗೋಕೆ ಮುಂಚೆನೇ ನಮಗೆ ಪರಿಚಯ ಇರೋ ಎಲ್ಲ ದೊಡ್ಡವರು ಮರೆತು ಹೋಗಿ ಹಾಸ್ಟೆಲ್ ಹುಡುಗರು ನೆನಪಲ್ಲಿ ಉಳಿತಾರೇ. ಚಿತ್ರ ನೋಡಿದವರಿಗೆ ಹಾಸ್ಟೆಲ್ ಒಳಗಿನಿಂದಲೇ ಕಾರಿಡಾರ್ ನಲ್ಲಿ ಓಡಾಡಿಕೊಂಡು, ಸೀನಿಯರ್ ರೂಮ್ ಹೊಗೆಯಲ್ಲಿ, ವಾರ್ಡನ್ ರೂಮ್ ನಲ್ಲಿ, ಕಿಂಡಿ ದಾರಿಯಲ್ಲಿ, ಓಮ್ನಿ ಅಲಂಕಾರದಲ್ಲಿ ಎಲ್ಲವನ್ನೂ ತಾವೇ ಸ್ವತಃ  ಪ್ರತ್ಯಕ್ಷವಾಗಿ ನೋಡಿದಂತೆ..

 ಆವಾಗಾವಾಗ exam ಗೆ ಇನ್ನೂ ಎಷ್ಟು hours ಬಾಕಿ ಇದೆ ಅಂತ check ಮಾಡೋದು.. ನಮ್ಮನ್ನು ಹಾಸ್ಟೆಲ್ ನ ಆ ರಾತ್ರಿಯಲ್ಲಿ ಉಳಿಸಿಕೊಳ್ಳಲು.. ಜೊತೆಗೆ ನಾಳಿನ ಎಕ್ಸಾಮ್ ಗೆ ಬೇಕಿರುವ ಎಲ್ಲ ತಯಾರಿ ಕೊರತೆಯ ಭಯದಲ್ಲಿ ಇರಿಸಿತ್ತು..

ಪ್ರೊಟೆಸ್ಟ್ ಸಾಂಗ್ theatre ನಲ್ಲಿ ನೋಡುವಾಗ.. ಅದ್ರಲ್ಲಿ ನಾವು 100% ಭಾಗಿಗಳು. ಸೀನಿಯರ್ಸ್ ಬಂದು GVK ಫೋಟೋ ಒಡೆದಿದ್ದಕ್ಕೆ ಶುರುವಾದ ಬ್ರಾಂಚ್ ಸಿಡಿ ಮದ್ದಿನ ವಾರ್ ನ ಸಂತ್ರಸ್ತರು ಮತ್ತು ಮಾತಿಗೆ ಮಾತು ಬೆಳೆದು ಮುನ್ನೆಲೆಗೆ ಬರುವ ಬಡವರು. ಉತ್ತರದವರಿಗೆ ಅರ್ಥವಾಗದ, ಮದ್ರಾಸಿಗಳಿಂದ ಬೇರೆಯಾಗದ ಕನ್ನಡಿಗರ ಅಸ್ತಿತ್ವ. ನಮ್ಮ ಅಸ್ತಿತ್ವದ ಜೊತೆಗೆ ನಮ್ಮವರನ್ನು ಹುಡುಕುವ, ಜಾತಿಪ್ರಜ್ಞೆ. ಎಲ್ಲ ಹಾಸ್ಟೆಲ್ ಮತ್ತು ವರ್ಕ್ ಸ್ಪೇಸ್ ಗಳಲ್ಲಿ ಸಾಮಾನ್ಯವಾಗಿರುವ  ಇರುವ ಭಿನ್ನತೆಗಳ ಸಣ್ಣ ಝಲಕ್ ಇಲ್ಲಿದೆ. ಆದರೆ ಎಲ್ಲವು ವೈವಿಧ್ಯತೆಯ ಬಿಂಬ.

 H R ರಂಗನಾಥ್ ಅವರ ಜೊತೆಗಿನ ಬೈಗುಳದ ಪ್ರಮೋಶನಲ್ ವಿಡಿಯೋಗೆ ಇಲ್ಲಿದೆ ಲಿಂಕು. ಆಗೊಮ್ಮೆ ಈಗೊಮ್ಮೆ ರಪಕ್ ಅಂತ ಬಂದು ಹೋಗುವ ರಮ್ಯಾ ಫ್ಯಾಂಟಸಿ ಲೋಕದ  ಕ್ರೆಡಿಟ್ ಬಂಟಿ ಗೌಡರಿಗೆ. ಕ್ಲೈಮಾಕ್ಸ್ ಗು ಮುನ್ನ ದೇವರ ದರ್ಶನದಿಂದ ಎಲ್ಲರು ಪುನೀತ! ಅತಿಶಯವಲ್ಲ. ಸಮಯೋಚಿತ.

ವೃತ್ತಿಪರ ವಿಮರ್ಶೆ ಬರೆಯುವವರಿಗೆ ಅಕ್ಷರಗಳ ಮಿತಿ. ಟಿವಿ, ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡುವವರಿಗೆ ಸಮಯದ ಮಿತಿ ಇರಬಹುದು. ರಿಲೀಸ್ ಆದ ದಿನಕ್ಕೆ ತುರ್ತಾಗಿ ಪಬ್ಲಿಷ್ ಮಾಡುವ ಸಂಪ್ರದಾಯದ ಕಮಿಟ್ಮೆಂಟ್ ಹಾಗೂ ನಡೆದು ಬಂದಿರೋ ಪರಿಪಾಠ.  ಸಿನಿಮಾ ನೋಡಿ ಆಗಿದೆ. ವಿಮರ್ಶೆಯ ಪ್ರಸವದ ಭಾರವು ಕಳೆದಿದೆ. ಈಗ ಮೂರ್ನಾಲ್ಕು ದಿನ ಕಳೆದ ಮೇಲೆ ಮತ್ತೆ ಅವರೆಲ್ಲ ಅಭಿಪ್ರಾಯ ಹಂಚಿಕೊಂಡರೆ ಹೇಳಲಾಗದೆ ಉಳಿಸಿಕೊಂಡಿದ್ದು, ಅಥವಾ ನಂತರದಲ್ಲಿ ಹೊಳೆದದ್ದನ್ನು ಅವರು ತಮ್ಮ ಆಪ್ತರಲ್ಲೊ, ಬಳಗದಲ್ಲೋ, ವೃತ್ತಿ ಗೆಳೆಯರಲ್ಲೋ ಅಥವಾ ಚಿತ್ರ ತಂಡದ ಜೊತೆಗೋ ಹಂಚಿಕೊಡಿರುತ್ತಾರೆ.. ಅಂಥವೇ ನೂರಾರು ಸೂಕ್ಷ್ಮ ವಿವರಗಳಿಂದ ಹಾಸ್ಟೆಲ್ ಹುಡುಗರು ಗೆದ್ದಿರುವುದು.

Comments

Popular posts from this blog

deepa...

hesaru beka...